ಕವನಗಳು...

ಒಲವ ಸಾಲ…ಕೊಡಿ

ಕೆಲಸವಿಲ್ಲದ ಬಡಗಿ
ನಾ, ಮೂರು ಬಿಟ್ಟ ಪರಿತ್ಯಾಗಿ.
ನನಗೊಲುಮೆಯ ಸಾಲವಿತ್ತು ಸಲಹಿ,
ಒಲವ ಒಡಲಿಗಿಟ್ಟು ತನುವ ತೂಗಿ

ಕೋರ್ಟಿನ ಕಟಕಟೇಲಿ ನಿಂತ
ಬರಿಗಾಲ ಬಿಕಾರಿ ನಾನು
ನನಗೊಂದಿಷ್ಟು ಒಲವ ಕೊಡಿ.
ಮೊದಲೇ ಹೇಳುವೆ, ಕೊಟ್ಟು ಮರೆತು ಬಿಡಿ..

ಧರ್ಮಕ್ಕೆ ಕೇಳುತ್ತಿಲ್ಲ, ದಾನ ಬೇಡುತ್ತಿಲ್ಲ
ಅಮಲು,ತೆವಲಿನ ಸಾಲವಾ ?
ಉರ್ಜಿತವಲ್ಲ ಬೇಡ ಬಿಡಿ..
ಕೊಟ್ಟರೆ ನಿರೀಕ್ಷೆಯಿಡಬೇಡಿ….

ಗೂಡು ಕೆಡವಿ, ಗೆದ್ದಲ ತಡವಿ
ಸಿಹಿ ಸುರಿದ ಇರುವೆಯ ನೋಡಿ
ಮೊಗೆಮೊಗೆದಿಟ್ಟಿವೆ ರಾತ್ರಿ ಹಗಲು
ಹೇಳಿ ನಿಮದೆಷ್ಟಿದೆ..ಪಾಲು..?

ಬಡ್ಡಿ ಕೇಳಿ, ಸುಸ್ತಿಹಾಕಿ
ಜೀತವನೇ ಮಾಡಿಸಿಕೊಳ್ಳಿ
ಪರವಾಗಿಲ್ಲ ಊರಿಗೆ ಹಂಚಿ
ಮಿಕ್ಕುಳಿದಷ್ಟೆ ಈ ಒಡಲಿಗೆ ಚೆಲ್ಲಿ

ಇಡಿ..ಇಡೀ.. ಪ್ರೀತಿ ಬೇಡ ,
ಕೈಗೆಡೆದ ಹಿಡಿಯಷ್ಟಾದರೂ ಸಾಕು
ಚೂರು ಚೂರುಗಳಲ್ಲಿಯೇ
ಅಗೋ ಆ ಪಾತಾಳವ ತುಂಬಬೇಕು

ನೋವುಂಡ ನದಿಗಳು ಸೇರಿ
ಸಾಗರವೇ ಉಪ್ಪಾಗಿದೆ.
ಕಡದ ಒಲವ ಸುರಿದು ಸಿಹಿಗಡಲಾಗಿಸುವೆ
ತೃಣವು ಬಿಡದೆ ನಿಮ್ಮೊಲವ ಅಲೆಗಳಿಗುಣಿಸುವೆ..

ಸ್ವಪ್ನ ತೀರದಿ ಕಾಲೆಳೆಯುತಿರುವೆ
ಸಾಗರದಸಿವಿನೆದುರೂ ಸೋತಿರುವೆ
ಕಡಲೊಡಲ ಭರಿಸಬೇಕಿದೆ..
ಈ ನಿರ್ಗತಿಕನಿಗೆ ನೀವು ನೆರವಾಗಬೇಕಿದೆ.