ಹೌದೋ ಹುಲಿಯಾ, ಇವರ ಹುಲಿ ಹಿಡಿಯಾ!

‘‘ಹೇ ಕೇಳ್ರಿ ಇಲ್ಲಿ, ಈ ದೇಶದ ಕಾನೂನು, ಕಟ್ಟಳೆಗಳ ಅಂತಿಮ ಗುರಿ ಈ ನೆಲದ ಜನರ ಕಲ್ಯಾಣವೇ ಆಗಿದೆ. ಇದರ ವಿರುದ್ಧವಾಗಿ ಯಾವುದೇ ಕಾನೂನಿದ್ದರೆ ಅದನ್ನು ಬೆಂಕಿಗೆ ಹಾಕಬೇಕು. ಭೂಮಿಯ ಹಕ್ಕಿಗಾಗಿ ಬಂದೂಕು ಕೈಗೆತ್ತಿಕೊಳ್ಳಬೇಕಾ?’’ ಹೀಗಂತ ಕಾಗೋಡು ತಿಮ್ಮಪ್ಪ ಅಧಿಕಾರಿಗಳ ಸಭೆಯಲ್ಲಿ ಕೇಳಿದ್ರಂತೆ.
ಈ ಒಬ್ಬ ಅಜ್ಜ ಬಿಟ್ಟರೆ, ಮತ್ಯಾರಿಗೂ ಮಲೆನಾಡಿನ ಕಾಡು ಮಂದಿಯ ಸಮಸ್ಯೆ, ಆತಂಕ , ನೋವು ವೇದನೆ, ಪ್ರತಿರೋಧ, ಅತಂತ್ರ ಭಾವಗಳು ಅರ್ಥವಾಗಿರಲಿಲ್ಲ. ಅಜ್ಜ ಬಡ್ಕೊಂಡು, ಸುಸ್ತಾಗಿ, ನಿಮ್ಮ ಹುಲಿ ಹಿಡಿಯಾ ಅಂತಾ ಸುಮ್ಮನಾಯ್ತು.
ಆದರೆ, ಅವತ್ತು ಸುಪ್ರೀಂಕೋರ್ಟ್​ನ ಒಂದು ತೀರ್ಪು, ಕೇಳಿ, ಕೇಕೆ ಹಾಕಿದ ಅರಣ್ಯ ಇಲಾಖೆ ವೈಲ್ಡ್​ ಲೈಫ್​ ಫೋಟೋಗ್ರಾಫರ್ಸ್, ವೃತ್ತ ಬರೆದಾಗೋಗಿದೆ, ಇನ್ನೇನಿದ್ರು ಕಾಡಿಂದ ಜನರನ್ನ ಒಡೋಸೋದೆಯಾ? ಅಂತಾ ಘರ್ಜಿಸಿದ್ರು. ಯಾಕೆಂದರೆ, ಅರಣ್ಯ ಹಕ್ಕು ಇರದವರೆನ್ನೆಲ್ಲಾ ಕಾಡಿಂದ ಹೊರಹಾಕಿ ಎಂಬರ್ಥದ ಆದೇಶ, ಇದ್ದ ನೆಲದಿಂದ್ಲೇ, ಕಟ್ಕೊಂಡ ಬದುಕನ್ನ ಹೊರದಬ್ಬಲು ರೆಡಿಯಾಗಿತ್ತು.
ಕಾಡಿನ ಹಾಗು ಕಾಡಂಚಿನ ಮಂದಿ, ಮೂರು ಅಪ್ಪಂದಿರ (ತಲೆಮಾರು) ಅಂದರೆ, ಸುಮಾರು 75 ವರ್ಷದಿಂದ ಕಾಡಲ್ಲೇ ಇದ್ದಿವಿ ನಾವು ಅಂತಾ ದಾಖಲೆ ಕೊಟ್ರಷ್ಟೆ, ಭೂಮಿಯ ಹಕ್ಕು ಕೊಡಲಾಗುತ್ತದೆ ಅನ್ನೋ ಕಾನೂನೊಂದು ಇದೆ. ಅನುಸೂಚಿತ ಬುಡಕಟ್ಟು ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು(ಮಾನ್ಯತೆ) ಕಾಯ್ದೆ-2006 ಅಂತಾರಂತೆ ಅದನ್ನ. ಇದ್ರ ಪ್ರಕಾರ, ‘‘ನಾನು, ನನ್ನಪ್ಪ, ನನ್ನಜ್ಜ, ಅವನಪ್ಪ ಎಲ್ಲಾ ಕಾಡ್ನಲ್ಲೆ ಇದ್ವು. ಅಗಾ ನೋಡ್ಕಳ್ಳಿ, ಅಲ್ಲಿರ ಮಾವು ಅಪ್ಪಂದು, ಬೇವು ಅವನ್ನಪ್ಪಂದು, ಹಲಸು ಅವನಪ್ಪನ ಅಪ್ಪನ ಹೆಣ ಹುಗ್ದಿದ್ದಕ್ಕೆ ಸಾಕ್ಷಿ ಅಂತಾ ಕೊಟ್ರೆ ಸಾಲ್ದಂತೆ. ಬದುಕಿದ್ದನ್ನ ರೆಕಾರ್ಡ್​ಲ್ಲಿ ಬರ್ದಿರ್ಬೇಕಂತೆ, ವರಲೆ ಹಿಡಿದ್ರೂ, ಅದನ್ನ ಗಟ್ಟಿ ಮಾಡಿಟ್ಟುಕೊಂಡಿರಬೇಕಂತೆ.
ಮೂರು ಮೂರು ಸಲ ಮುಳುಗಿಸಿದ ನೀರಲ್ಲಿ ಹೆಂಗ ದಾಖಲೆ ತರೋದು ಅಂತಾ ಕೇಳಿದ್ರು ಹೊಸನಗರದ ಕಡೆಯವರು. ಆದರೆ, ಇದೆಲ್ಲಾ ಯಾರಿಗೂ ಬೇಕಿರಲ್ಲ. ಕಾನೂನಿದೆ , ದಾಖಲೆ ತಂದುಕೊಡಿ, ಇಲ್ಲಾ ಜಾಗ ಬಿಡಿ ಅನ್ನೋದೊಂದೆ ಉತ್ತರವಾಗಿಹೋಯ್ತು. ಆಡಳಿತ ಪಕ್ಷಗಳಿಗೆ, ವೋಟು, ರೆಸಾರ್ಟು, ಆಸ್ತಿ ರೇಟು, ಫ್ಯಾಮಿಲಿ ಪಾರ್ಟು ಮುಖ್ಯವಾದಷ್ಟು, ಮಲೆನಾಡಿಗರ ಸಮಸ್ಯೆ ಮುಖ್ಯವೆನಿಸಲಿಲ್ಲ. ಈ ನಿರ್ಲಕ್ಷ್ಯದ ಪರಿಣಾಮ, ಸುಪ್ರೀಂಕೋರ್ಟ್​ ಫರ್ಮಾನನ್ನ ಹೊರಡಿಸಿತ್ತು.
ಅಲ್ಲಿವರೆಗೂ ಹಂದಿ, ಮಂಗ, ಹುಲಿ, ಆನೆ, ಚಿರತೆ ಕಾಟ ಮಾರಾಯ, ಎಂಥಾ ಸಾಯೋದೋ ಅಂತಿದ್ದವರೆಲ್ಲಾ, ಒಕ್ಕಲೆಬ್ಬಿಸ್ತಾರಂತಲ್ಲೋ ಎಲ್ಗಾ ಹೋಗಾದೋ ಅಂತಾ ಕೇಳೋಕೆ ಶುರುಮಾಡಿದ್ರು. ಹೀಗೆ ಕೇಳಿದ ಕಾಡಿನ ಕೂಗು ಕೇಳಿಸಿಕೊಂಡ ಪ್ರಕೃತಿ ಪುತ್ರರೆಲ್ಲಾ, ಆಗಲಿ, ಹೋಗಲಿ, ಸಾಯಲಿ ಎಲ್ಲರೂ, ಕಾಡು ಉಳಿಬೇಕು ಎಂದೇ ಷರಾ ಬರೆದರು.
ಊದ್ದುದ್ದ ಫೋಸ್ಟ್​ ಇದೇ ಸೋಶಿಯಲ್​ ಮೀಡಿಯಾಗಳಲ್ಲಿ ಹಾಕಿದರು. ಹೋರಾಟಗಳನ್ನೆ ಬೂಟಾಟಿಕೆ ಎಂದು ಕರೆದರು. ಕಾಡು ಬೆಳಿಬೇಕು, ನಾಡು ಉಳಿಬೇಕು, ಕಾಡಲ್ಲಿದ್ದವರು ಸತ್ತರೆಷ್ಟು ಬಿಟ್ಟರೆಷ್ಟು ಅಂತಾ ಗೋಷ್ಟಿಗಳನ್ನ ಮಾಡಿದರು. ಉಳಿದವರಿಗೆ ಕಂಡಂತೆ , ಹೋರಾಟಕ್ಕೆ ಧ್ವನಿ ಆದವರ ಸಂಖ್ಯೆ, ಒಂದು.ಎರಡು..ಮೂರು..ಮತ್ತೊಂದು…ಇನ್ನೊಂದನ್ನ ಮೀರಿರಲಿಲ್ಲ.
ಅವತ್ತು ಕಾಡಿನ ಮಂದಿ ಪರಿತಾಪಗಳನ್ನ ಕಾಣದೆ, ಹಾಗೇ ಆಗಬೇಕು, ಏನ್​ ಕಾಡು ಇವರಪ್ಪಂದಾ ಅಂದವರೆಲ್ಲಾ, ಇವತ್ತು ಎನ್​ಆರ್​ಸಿಗೆ ದಾಖಲೆ ಕೊಡಬೇಕಾ? ಇದೆಂತದ್ರಿ ಉಪದ್ರ, ಸರಿಯಿಲ್ಲ ಕಂಡ್ರಿ ವ್ಯವಸ್ಥೆ ಥೂ , ಹೋರಾಡ್ಬೇಕು ಬನ್ನಿ ಅಂತಿದ್ದಾರೆ. ಅವತ್ತು ಕಾಡಿನ ನೆಲಕ್ಕೆ ಬಿದ್ದ ಕೈ, ಇವತ್ತು ಬದುಕಿನ ಅಸ್ತಿತ್ವಕ್ಕೆ ಕೈ ಹಾಕುತ್ತಿದೆ. ನಾವೇ ವೋಟು ಒತ್ತಿ, ನಾವೇ ನಮ್ಮ ಕೈಗೆ ಹಗ್ಗಕಟ್ಟಿಕೊಂಡು , ನಮ್ಮ ನೆಲದಲ್ಲಿ ನಾವೇ ಪರಕೀಯರಾಗುತ್ತಿದ್ದೇವೆ. ಮುಂದೆ ಅತಂತ್ರವೂ ಆಗಬಹುದು.

ಎಡವಿದರೂ ಮೋದಿಗೆ ಅರಿವಿದೆ, ಕೆಂಪು, ಕೇಸರಿ ನಡುವೆ ಅಡ್ಜೆಸ್ಟ್​ಮೆಂಟಿದೆ, ದೇಶ ಉರಿಯುತ್ತಿದೆ..!

ಎಡವಿದರೂ ಮೋದಿಗೆ ಅರಿವಿದೆ, ಕೆಂಪು, ಕೇಸರಿ ನಡುವೆ ಅಡ್ಜೆಸ್ಟ್​ಮೆಂಟಿದೆ, ದೇಶ ಉರಿಯುತ್ತಿದೆ..!ನಮ್ಮ ಭಾಷೆ, ಸಂಸ್ಕೃತಿಯನ್ನು ಕೊಲ್ಲುವ ಸನ್ನಿವೇಶವನ್ನು ಸ್ವೀಕರಿಸಲು ಹೇಗೆ ಸಾಧ್ಯ. ನಾಳೆ ನನ್ನ ಮಕ್ಕಳಿಗೆ ನಾನು ಯಾರೆಂದು ತಿಳಿಸಲಿ. ಬಂಗಾಳಿಗಳ ಗುಲಾಮ ಎನ್ನಲಾ..? ಇವತ್ತು ನನ್ನ ನೆಲವನ್ನ ಕಿತ್ತುಕೊಂಡವರು, ನಾಳೆ ನಮ್ಮ ಬದುಕನ್ನೇ ಕಿತ್ತುಕೊಳ್ಳಲಾರರೇ..? ಅಸ್ಸಾಮಿಯೊಬ್ಬನ ಪ್ರಶ್ನೆ. ಉತ್ತರಿಸುವ ಪಕ್ಷಗಳು, ಒಂದು ಸಮುದಾಯಕ್ಕಾಗಿ ಪರ-ವಿರುದ್ಧ ಯುದ್ಧಕ್ಕೆ ಇಳಿದಿವೆ. ದೇಶದಾದ್ಯಂತ ನಡೆಯುತ್ತಿರುವ ಹೋರಾಟದ ಪೈಕಿ, ಅಸ್ಸಾಮಿಗಳ ಕೂಗು ಎಷ್ಟರಲ್ಲಿದೆ. ಮುಸ್ಲಿಮರಿಗೆ ಪೌರತ್ವ ಕೊಟ್ಟಿಲ್ಲ ಎನ್ನುವುದೇ ಸಿಎಬಿಯ ವಿರೋಧಕ್ಕೆ ಇರುವ ಪ್ರಮುಖ ಪ್ರತಿರೋಧ ಆದಂತಿದೆ. ನಗುನಗುತಾ ಕಲ್ಲು ಹೊಡೆಯುವುದನ್ನು ಆಕ್ರೋಶದ ಧ್ವನಿ ಎನ್ನುವುದೇ? ಟ್ರೈನ್​ನ ಗ್ಲಾಸ್​​ ಒಡೆದು ಪೋಸು ಕೊಡುವ ಮುಖಕ್ಕೆ ದಡ್ಡತನ ಎನ್ನಲೇ? ಪೊಲೀಸರ ಸಿಟ್ಟಿಗೆ ಹೆದರಿ ಓಡುವ ಅಮಾಯಕರ ಪರ ಧ್ವನಿ ಎತ್ತಲೇ? ಪ್ರತಿಭಟನೆಯ ರೂಪಕಗಳನ್ನು ವಿವರಿಸುವುದು ಕಷ್ಟ.

ಆದರೆ ಒಂದಂತೂ ಸತ್ಯ. ಮಾನ್ಯ ಮೋದಿಯವರೇ, ನಿಮ್ಮ ಇಷ್ಟಾರ್ಥ ಈಡೇರಿದಂತಿದೆ. ಭಾರತದ ಬುಡಕ್ಕೆ ಕೊಟ್ಟ ಕಿಡಿ, ಹೊತ್ತಿಕೊಂಡಿದೆ. ಎದುರಾಳಿಗಳು ವ್ಯವಸ್ಥಿತವಾಗಿ ಧಗಧಗಿಸಿ ಉರಿಸುತ್ತಿದ್ದಾರೆ. ಉರಿಯುತ್ತಿರುವ ಸುಳ್ಳಿನ ಟೈರ್​ಗಳು, ಭವಿಷ್ಯವನ್ನ ಪ್ರತಿಬಿಂಬಿಸ್ತಿದೆ. ಮೊನ್ನೆ ಕಾಶ್ಮೀರ, ಇವತ್ತು ಈಶಾನ್ಯ, ನಾಳೆ ದಕ್ಷಿಣ.

ವಿದೇಶ ಪ್ರವಾಸ ಬೆಳೆ ತೆಗಿತಿಲ್ಲ. ಬರಡು ಆರ್ಥಿಕತೆಯಲ್ಲಿ ನೀರು ಬರ್ತಿಲ್ಲ. ಶನಿ ಹಿಡಿದ ನೋಟಿನ ರೇಟಿಗೆ, ದೆಸೆ ಎಟುಕುತ್ತಿಲ್ಲ. ಉಂಡು, ಮಲಗಿ, ಹೇಲುವ ಜನರ ಜೀವನವೂ ನಡೆಯುತ್ತಿಲ್ಲ. ಇದರ ಪರಿಣಾಮ, ನಿಮಗೆ(ಮೋದಿ) ಮೊದಲಿದ್ದ ಜೈಕಾರ ಸಿಗುತ್ತಿಲ್ಲ. ಟಿಆರ್​ಪಿ ಕೊನೆಗಿಳಿಯುತ್ತಿದೆ. ವೇದವಾಕ್ಯಗಳು ವಾಯಿದೆ ಕಳೆದುಕೊಳ್ತಿದೆ. ಟ್ವಿಟ್ಟರ್​ನ ಮೈಕ್​ನಿಂದ ಆಚೆ ಬಂದು ಜನರಿಗೆ ಮುಖ ಕೊಟ್ಟು ಪ್ರಶ್ನೆ ಎದುರಿಸಲಾಗುತ್ತಿಲ್ಲ. ಸದಾ ಮುಖಸ್ತುತಿಗೊಳಪಟ್ಟವರಿಗೆ ಆರ್ಥಿಕತೆಯ ಸಾವು, ರಾಹುಕಾಲ ತಂದಿಟ್ಟಿದೆ. ಇಷ್ಟಕ್ಕೆನಾ ವಿಚಾರ ಬದಲಿಸಿದ್ದು? ಜನ ಆದದ್ದನ್ನೆಲ್ಲಾ ಮರೆಯಲಿ ಎನ್ನುವುದಷ್ಟೆನಾ ಉದ್ದೇಶ? ಸಮಾಜ ಕುಲುಮೆಯಲ್ಲಿದ್ರೆ, ಬೇಕಾದ ಕಡೆಗೆ ಬಗ್ಗಿಸಬಹುದೆನ್ನುವ ಅಜೆಂಡವೂ ಇದೆಯೇ? ಅಥವಾ ಭವಿಷ್ಯದ ಚಾಣಕ್ಯ ನಕ್ಷೆಗೆ ಹಾಕಿರುವ ಬ್ಲೂ ಪ್ರಿಂಟೆ ಈ ಉಕ್ಕಿದ ಬೆಂಕಿ?

ಬಂದ ಹೊಸತರಲ್ಲಿ ಇದನ್ನೆಲ್ಲಾ ಮಾಡಬಹುದಿತ್ತಲ್ವಾ? ಎರಡನೇ ಹಂತದಲ್ಲೇ ಸಾಲು-ಸಾಲು ದುಸ್ಸಾಹಸಗಳೇಕೆ ಎಂದ್ಯಾರು ಕೇಳರು. ನೀವು ಬಿತ್ತಿದ ಬೆಂಕಿಗೆ, ಭಯಂಕರ ಬೆಳೆ ತೆಗೆಯುತ್ತಿವೆ ಪಕ್ಷಗಳು, ಸಿದ್ಧಾಂತಿಗಳು ಮತ್ತು ಇತ್ಯಾದಿಗಳು. ಇದು ನಿಮಗೆ ಮುಳುವಾ..? ಲಾಭವಾ? ಭವಿಷ್ಯ ನುಡಿಯುತ್ತದೆ.

ಹಿಂದೂ-ಮುಸ್ಲಿಮ್​ ಎನ್ನುವ ಎರಡು ವಿಷಯಗಳು ಸಾಕು. ಈ ದೇಶವನ್ನು ಸುಡಲು. ಈಗ ಲಭೋ ಲಭೋ ಅಂತಿರೋ ಕಾಂಗ್ರೆಸ್​ನ ಇತಿಹಾಸದಲ್ಲಿ ಮಾಡಿದ್ದೇನು? ಈಗ ಬಿಜೆಪಿ ಮಾಡ್ತಿರುವುದನ್ನೆ ಅಲ್ಲವೇ? 1971-72ರಲ್ಲಿ ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ನಾಗರಿಕತ್ವ ಕೊಡಲ್ಲ ಎಂದವರು, ಇದೇ ಬಾಂಗ್ಲಾದೇಶದ ನಿರಾಶ್ರಿತರು ಹಾಗೂ ಇದಿ ಅಮೀನ್ಸ್​ನ ಉಗಾಂಡಾದಿಂದ ಹೊರದಬ್ಬಲ್ಪಟ್ಟ ನಿರಾಶ್ರಿತರ ಪರವಾಗಿ ನಿಂತಿದ್ದರು. ಇದೊಂದು ಉದಾಹರಣೆಯಷ್ಟೆ. ಹೀಗೆ ಒಂದು ಸಮುದಾಯವನ್ನು ಓಲೈಸುತ್ತಲೇ ಬಂದವರು, ಈಗ ನಮ್ಮದು ಸಾಫ್ಟ್​​ ಹಿಂದುತ್ವ ಅಂತಾ ಯಾಕೆ ಎನ್ನುತ್ತಿದ್ದಾರೆ? ರಾಮಮಂದಿರ ನಮ್ಮ ಕನಸಾಗಿತ್ತು ಎನ್ನುವ ಸಮಜಾಯಿಷಿ ಯಾಕೆ ಕೊಡುತ್ತಿದ್ದಾರೆ? ಸಿದ್ಧಾಂತದ ಮೂಲವ್ಯಾದಿಯಲ್ಲಿ ಬಳಲುತ್ತಿರುವ ಬಲ್ಲವರು, ಉತ್ತರ ಕೊಡಬಲ್ಲರೇನೋ..?

ಸಮಾನತೆ ಎನ್ನುವ ತತ್ವವನ್ನ ತನ್ನ ತಳದಡಿಯಲ್ಲಿಟ್ಟುಕೊಂಡ ಎಡ ಪಕ್ಷಗಳ ಸಾಧನೆ ಏನು? ಸ್ವಾರ್ಥಪರತೆ ಹಾಗೂ ಕೌಟುಂಬಿಕತೆಯ ಆಚೆಗೆ ಪ್ರಾದೇಶಿಕ ಪಕ್ಷಗಳು ದೇಶಕ್ಕೆ ಕೊಟ್ಟ/ಕೊಡುತ್ತಿರುವ ಕೊಡುಗೆ ಏನು? ಬಹಿರಂಗವಾಗಿ ಎಲೆಕ್ಷನ್​ನಲ್ಲಿ ಮಾಡಿದ ಸಾಧನೆ ಹೇಳಲಾರದವರು, ಜಾತಿ, ಧರ್ಮದಲ್ಲಿ ವೋಟು ಎಣಿಸುತ್ತಾರೆ ಎನ್ನುವುದು ಸುಳ್ಳಾ? ಸಮಾನತೆ ಅಂದವರು ಅಸಮಾನತೆಯನ್ನ ಬಿತ್ತುತ್ತಿರುವುದು ಸತ್ಯವಲ್ಲವಾ? ಜಾತ್ಯಾತೀತತೆ ಎನ್ನುವುದೇ ನಿಜವಾದರೆ, ನಮೂದಿಸುವ ಕಾಲಂಗಳಲ್ಲಿ ಜಾತಿ ಇರಲೇಬಾರದಿತ್ತು. ಮೀಸಲಾತಿಯ ಬುಟ್ಟಿಯೊಳಗೆ ಜಾತಿ ಗಣತಿ ನಡೆಯಲೇ ಬಾರದಿತ್ತಲ್ಲವೆ?

ಬಿಜೆಪಿಗೆ ತಾನೇನು ಮಾಡುತ್ತೇನೆ ಅಂತಾ ತಿಳಿದಿದೆ. ಅದರ ಹಿಂದಿರುವವರಿಗೆ ಮುಂದೇನೇನು ಆಗಬೇಕು ಎನ್ನುವುದರ ಅರಿವಿದೆ. ಸುದೀರ್ಘವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ರೂಪಿಸಿದ ಕರಡು ಪ್ರತಿಯ ಹಾಳೆಗಳು ಈಗ, ಒಂದೊಂದೆ ತೆರೆದುಕೊಳ್ತಿದೆ.

ಪ್ರೋ. ಎಂ.ಡಿ.ನಂಜುಂಡಸ್ವಾಮಿಯವರು ಹೇಳಿದ ಮಾತೊಂದನ್ನ ನಿನ್ನೆಯಷ್ಟೆ ಓದಿದೆ. ಅದನ್ನ ಇಲ್ಲಿ ನಮೂದಿಸ್ತಿದ್ದೇನೆ.

‘‘If I grab your pen, you can not write, If I break your glasses you can not see properly: You need to understand this. Making you not to write by grabbing your pen and making you not to see properly by breaking your glasses is a non-violent direct action against you. If I slap you that’s a violence’’

ತಮ್ಮ ಚಳವಳಿ non-violent movement ಅಂತಾ ಕರೆದಕೊಳ್ಳುತ್ತಿರಲ್ಲಾ ಎಂದು ಪತ್ರಕರ್ತೆ ಕೇಳಿದ ಪ್ರಶ್ನೆಗೆ ನಂಜುಂಡಸ್ವಾಮಿಯವರು ಕೊಟ್ಟ ಉತ್ತರ ಇದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿತ್ತು. ಬಹುಶಃ ಬಿಜೆಪಿ ಇದೆರೆಡನ್ನೂ ಅರ್ಥಮಾಡಿಕೊಂಡು ವ್ಯವಸ್ಥಿತವಾಗಿ ಬಳಸುತ್ತಿದೆ ‘‘ಅಸ್ತ್ರವಾಗಿ’’. ನಾವಿಲ್ಲಿ ಪ್ರತಿಕ್ರಿಯಿಸುತ್ತಿದ್ದೇವಷ್ಟೆ.

ಬೆಂಗಳೂರುಕನ್ನಡ ರಾಜ್ಯೋತ್ಸವಅಜ್ಜಿಮನೆ ಗಣೇಶ

ಒಲವ ಸಾಲ…ಕೊಡಿ

ಕೆಲಸವಿಲ್ಲದ ಬಡಗಿ
ನಾ, ಮೂರು ಬಿಟ್ಟ ಪರಿತ್ಯಾಗಿ.
ನನಗೊಲುಮೆಯ ಸಾಲವಿತ್ತು ಸಲಹಿ,
ಒಲವ ಒಡಲಿಗಿಟ್ಟು ತನುವ ತೂಗಿ

ಕೋರ್ಟಿನ ಕಟಕಟೇಲಿ ನಿಂತ
ಬರಿಗಾಲ ಬಿಕಾರಿ ನಾನು
ನನಗೊಂದಿಷ್ಟು ಒಲವ ಕೊಡಿ.
ಮೊದಲೇ ಹೇಳುವೆ, ಕೊಟ್ಟು ಮರೆತು ಬಿಡಿ..

ಧರ್ಮಕ್ಕೆ ಕೇಳುತ್ತಿಲ್ಲ, ದಾನ ಬೇಡುತ್ತಿಲ್ಲ
ಅಮಲು,ತೆವಲಿನ ಸಾಲವಾ ?
ಉರ್ಜಿತವಲ್ಲ ಬೇಡ ಬಿಡಿ..
ಕೊಟ್ಟರೆ ನಿರೀಕ್ಷೆಯಿಡಬೇಡಿ….

ಗೂಡು ಕೆಡವಿ, ಗೆದ್ದಲ ತಡವಿ
ಸಿಹಿ ಸುರಿದ ಇರುವೆಯ ನೋಡಿ
ಮೊಗೆಮೊಗೆದಿಟ್ಟಿವೆ ರಾತ್ರಿ ಹಗಲು
ಹೇಳಿ ನಿಮದೆಷ್ಟಿದೆ..ಪಾಲು..?

ಬಡ್ಡಿ ಕೇಳಿ, ಸುಸ್ತಿಹಾಕಿ
ಜೀತವನೇ ಮಾಡಿಸಿಕೊಳ್ಳಿ
ಪರವಾಗಿಲ್ಲ ಊರಿಗೆ ಹಂಚಿ
ಮಿಕ್ಕುಳಿದಷ್ಟೆ ಈ ಒಡಲಿಗೆ ಚೆಲ್ಲಿ

ಇಡಿ..ಇಡೀ.. ಪ್ರೀತಿ ಬೇಡ ,
ಕೈಗೆಡೆದ ಹಿಡಿಯಷ್ಟಾದರೂ ಸಾಕು
ಚೂರು ಚೂರುಗಳಲ್ಲಿಯೇ
ಅಗೋ ಆ ಪಾತಾಳವ ತುಂಬಬೇಕು

ನೋವುಂಡ ನದಿಗಳು ಸೇರಿ
ಸಾಗರವೇ ಉಪ್ಪಾಗಿದೆ.
ಕಡದ ಒಲವ ಸುರಿದು ಸಿಹಿಗಡಲಾಗಿಸುವೆ
ತೃಣವು ಬಿಡದೆ ನಿಮ್ಮೊಲವ ಅಲೆಗಳಿಗುಣಿಸುವೆ..

ಸ್ವಪ್ನ ತೀರದಿ ಕಾಲೆಳೆಯುತಿರುವೆ
ಸಾಗರದಸಿವಿನೆದುರೂ ಸೋತಿರುವೆ
ಕಡಲೊಡಲ ಭರಿಸಬೇಕಿದೆ..
ಈ ನಿರ್ಗತಿಕನಿಗೆ ನೀವು ನೆರವಾಗಬೇಕಿದೆ.

ಸಾವಿಗೂ ಕಾರಣ ವಿರುತ್ತಾ.. ( ತಿಂದ ಸತ್ತ, ಕುಡದ್​ ಸತ್ತ, ಅಂತ ಸಾವಿಗೂ ಕಾರಣ ಹೇಳುವ ಬಗ್ಗೆ ಮೂರು ವರ್ಷಗಳ ಕೆಳಗೆ ಪಂಜುವಿನಲ್ಲಿ ಬರೆದ ಬರಹ)

ಅಪರೂಪಕ್ಕೆ ಎಂಬಂತೆ ಈ ವರ್ಷ ಶರಾವತಿ ಲಿಂಗನಮಕ್ಕಿ ಅಣೆಕಟ್ಟೆಯನ್ನ ದಾಟಿ ಹರಿಯುತ್ತಿದ್ದಾಳೆ. ಬೇಸಿಗೆಯಲ್ಲಿ ತನ್ನ ಪಾಲಿನ ಹದಿನೈದು ಪರ್ಸೆಂಟ್ ವಿದ್ಯುತ್ ನ್ನ ಶರಾವತಿ ಖಂಡಿತಾ ಕೊಡುತ್ತಾಳೆ. ಇದಕ್ಕೆ ಪೂರಕವಾಗಿ ಕಣಿವೆ ಪ್ರದೇಶದ ವಿದ್ಯುತ್ ತಯಾರಿಕಾ ಯಂತ್ರಗಳು ಸಹ ಕೆಲಸ ಶುರುವಿಟ್ಟುಕೊಡಿದೆ. ನಾಡು ಸಂತೋಷದಲ್ಲಿದೆ, ಸರ್ಕಾರ ತೃಪ್ತಿಯಾಗಿದೆ. ಆದರೆ ಶರಾವತಿಯ ಮಡಿಲಲ್ಲಿ ನಡೆದ ಘಟನೆಯೊಂದು ಮಾತ್ರ ನನ್ನನ್ನ, ಕಳೆದೊಂದು ತಿಂಗಳಿನಿಂದಲೂ, ಬಿಡದೆ ಕಾಡುತ್ತಿದೆ.ಅಲ್ಲಿ ನಡೆದ ಸಾವಿನ ಘಟನೆಯೊಂದು, ನನ್ನನ್ನ ಮರಣ ಚಿಂತನೆಯಲ್ಲಿ ತೊಡಗಿಸಿದೆ.  ಮನಸ್ಸಿನ ಗೂಗಲ್ ನಲ್ಲಿ ಮೃತ್ಯು ಸಂಬಂಧಿತ ಚರ್ಚೆ ನಡೆಸುತ್ತಿದೆ….ನಿಜಕ್ಕೂ ಆ ಸಾವಿಗೆ ಅರ್ಥ ಇರಲಿಲ್ವ ?, ಅವರ ಸಾವಿಗೊಂದು ನೆಗಟಿವ್ ವ್ಯಾಖ್ಯಾನ ಬೇಕಾಗಿತ್ತಾ?. ಇಂತಹುದೆ ಹತ್ತಾರು ಪ್ರಶ್ನೆಗಳು, ನನ್ನ ಆಲೋಚನ ಲಹರಿಯ ನೆಟ್‍ವರ್ಕ್ ನ್ನೆ ಬುಡಮೇಲು ಮಾಡಿಟ್ಟಿದೆ … ಆ ಮೂವರ ಸಾವು…

ಸಾವಿಗೆ ಸಾವಿರ ದಾರಿ, ಅದರ ತುದಿ ಮೊದಲನ್ನು ತಿಳಿದವರ್ಯಾರು. ದೂರ ದೇಶದ ವಿಜ್ಞಾನಿಗಳು ಸಾವಿನ ರಹಸ್ಯವನ್ನ ರಕ್ತದಲ್ಲಿ ಕಂಡಿದ್ದಾರಂತೆ. ಆ ರಹಸ್ಯ ಸಾಮಾನ್ಯನನ್ನ ತಲುಪವಷ್ಟರಲ್ಲಿ ಮೃತ್ಯು ಮತ್ತಷ್ಟು ಗೌಪ್ಯವಾಗಿರುತ್ತೆ ಬಿಡಿ. ಆದರೆ ಅಂದು ಶರಾವತಿಯನ್ನ ಹತ್ತಿರದಿಂದ ನೋಡ ಹೊರಟ ಹುಬ್ಬಳ್ಳಿಯ ಮೂವರು ಯುವಕರಿಗೆಮ, ಸಾವಿನ ಕೂಪಕ್ಕೆ ತೆರಳುತ್ತಿದ್ದೇವಾ ?, ಅನ್ನುವ ಸೂಕ್ಷ್ಮ ಕೂಡ ಸಿಕ್ಕಿರಲಿಲ್ಲ. ಶರಾವತಿ ದುಮ್ಮಿಕ್ಕುವ ಸ್ಥಳಕ್ಕೆ,ಸಂಭ್ರಮಿಸುತ್ತಲೆ ಹೋಗಿದ್ದರು. ಅಷ್ಟೆಅಲ್ಲ ಮುಂಗಾರು ಮಳೆಯ ಸ್ಪಾಟ್ ನೋಡಲೆ ಬೇಕೆನ್ನುವ ಬಯಕೆಯೊಂದಿಗೆ ಕಷ್ಟಪಟ್ಟು, ಜೋಗದ ರಾಜಪಾಲ್ಸ್ ತುದಿಯನ್ನು ತಲುಪಿದ್ದರು. ಪ್ರಯಾಸದ ಪ್ರವಾಸ ಮುಗಿಸಿ ನಿಂದವರಿಗೆ, ಮೌಂಟ್ ಎವೆರೆಸ್ಟ್ ಏರಿದಷ್ಟೆ ದಣಿವಾಗಿತ್ತು.

ಇನ್ನೇನು ಸಾಧಿಸಿದ ಘಳಿಗೆ, ಕ್ಯಾಮರಾ ಕಣ್ಣಲ್ಲಿ ಕ್ಲಿಕ್ಕಿಸಿಕೊಳ್ಳಬೇಕಿತ್ತು. ದುರದೃಷ್ಟ ವಿಧಿ ಬೇರೆಯದ್ದನ್ನೆ ಆಶಿಸಿತ್ತು . ಸ್ನೇಹಿತರೆಲ್ಲ ಕೂತು ಸುಧಾರಿಸಿಕೊಳ್ಳುತ್ತಿರುವಾಗಲೆ, ಯುವಕನೊಬ್ಬನನ್ನ ಶರಾವತಿ ಸೆಳದಿದ್ದಾಳೆ. ಇತ್ತ ಸಾಹಸಕ್ಕೆ ತೆರೆದುಕೊಂಡ ಮನಸ್ಸಿನೊಂದಿಗೆ ಯುವಕನೊಬ್ಬ ನೀರಿಗೆ ಇಳಿದ. ದುರ್ಘಃಟನೆಯೊಂದು ನಡೆದೆ ಹೊಯಿತು. ಬಿರುಸಿದ್ದ ನೀರಲ್ಲಿ ಆ ಯುವಕ ಕಾಲುಜಾರಿದ. ಆತನನ್ನ ಹಿಡಿದುಕೊಳ್ಲಲು ಹೋಗಿ ಇನ್ನಿಬ್ಬರು ನೀರಿಗೆ ಬಿದ್ದರು. ಅಲ್ಲಿದ್ದವರೆಲ್ಲ ಎನಾಯಿತೋ ಎನ್ನತ್ತಲೆ ಗಾಬರಿ ಬಿದ್ದರು. ನೋಡನೋಡುತ್ತಲೆ ಶರಾವತಿ ಮೂವರನ್ನ ಸೇರಿಕೊಂಡೆ ದುಮ್ಮುಕ್ಕಿದಳು. ಜೋಗದ ಗುಂಡಿಯಲಿ ಬಿದ್ದ ಆ ಮೂವರ ಪ್ರಾಣ, ಗಾಳಿಯಲ್ಲಿ ಹೋಯಿತಾ, ಬಂಡೆಯ ಕೊರಕಲಿನ ಮೇಲೆ ಉರುಳಿತಾ ಗೊತ್ತಿಲ್ಲ. ಮೂವರ ಆಯುಷ್ಯವಂತು ಮುಗಿದಿತ್ತು. ಮೃತ್ಯು ಆ ಮೂವರನ್ನ ಬಗಲಲ್ಲೆ ಎತ್ತೊಯ್ಯಿದಿತ್ತು.

ನಿಜಕ್ಕೂ ಈ ಸಾವು ನ್ಯಾಯವೆ? ಆಗಲೆ ಇಂತಹದೊಂದು ಪ್ರಶ್ನೆ ಕಾಡಲು ಆರಂಭಿಸಿದ್ದು ..

ಸತ್ತವನ ಆತ್ಮಕ್ಕೆ ಮುಕ್ತಿ ಕೊಡಲು ಸಂಸ್ಕಾರವನ್ನಾದರೂ ಮಾಡಬೇಕಲ್ಲ. ಆದರೆ ಬೋರ್ಗೆರವ ಶರಾವತಿಯ ಹಾಲ್ನೊರೆಯ ಮಧ್ಯೆ, ಕಳೆದು ಹೋದ ಶವಗಳು ಎಲ್ಲಿದೆ ಯಾರಿಗೆ ಗೋತ್ತು. ನಿಘೂಡ ಕಗ್ಗಲ್ಲ ಬಂಡೆಯೊಳಗೆ ಇಳಿಯೋದು ಸಾದ್ಯವಾ. ಇದು ಸಾದ್ಯವಾಗದ ಕೆಲಸ ಬಿಡಿ ಬಿಡಿ ,ಎನ್ನುವ ವರಾತದ ನಡುವೆಯೆ ಶುರುವಾಯಿತು, ಹೆಣ ಎತ್ತುವ ಕಾರ್ಯ. ಕೋತಿರಾಜನು ಬಂದು ಉತ್ಸಾಹದಿಂದಲೆ ಕೈಜೋಡಿಸಿದ. ಆದರೆ ಅವನೊಂದಿಗೆ ಹೋರಟವರಿಗೆ ಮಾತ್ರ ಸಮದಾನವಿರಲಿಲ್ಲ. ಹೋದವರು ಹೋದರು ಇದ್ದವರಿಗೆ ಪರದಾಟ ತಂದಿಟ್ಟು, ಹೀಗೆ ಕೊಸರುತ್ತಲೆ ಅಗ್ನಿಶಾಮಕ ದಳದವರು ಶವ ಹುಡುಕೋಕೆ ಇಳಿದರು. ಯಾರ್ಯಾರೋ ಇಲ್ಲಿ ಬಂದು ಸಾಯುತ್ತಾರೆ ಅಂತ, ನಾವು ಅವರೊಟ್ಟಿಗೆ ಸಾಯೋಕಾಗುತ್ತಾ ನೋ ವೇ ಎನ್ನುವಂತ ಮನಸ್ಥಿತಿ ಅಲ್ಲಿ ನಿಂತಿದ್ದ ಅಧಿಕಾರಿಗಳದ್ದಾಗಿತ್ತು.

ಮತ್ತೆ ಕೆಲ ಪ್ರವಾಸಿಗರು, ಮು….., ಮಕ್ಕಳಿಗೆ ಬೇರೆಲ್ಲು ಸಿಗಲಿಲ್ಲ ಅಂತ ಸಾಯೋಕೆ, ಅಲ್ಲೆ ಹೋಗಿದ್ದರಾ ಅಂತ ಬೈದರೆ ವಿನಃ ಸಹಾನುಬೂತಿಯನ್ನಂತು ತೋರಿಸಲಿಲ್ಲ.ಮತ್ತೊಂದಿಷ್ಟು ಬುದ್ದಿವಂತರು ಹಾಗೆ ಆಗಬೇಕು ಆಗಲೆ ಬುದ್ದಿ ಬರೋದು ಅಂದರು, ಬುದ್ದಿ ಬರಬೇಕಾಗಿದ್ದು, ಸತ್ತವರಿಗೋ ಬದುಕಿದ್ದವರಿಗೋ ಗೊತ್ತಾಗಲಿಲ್ಲ.  ಇನ್ನು ಘಟನೆಯನ್ನ ನೋಡಿಯೋ, ಕೇಳಿಯೋ, ತಿಳಿದುಕೊಂಡವರು ಹೇಳಿದ್ದು ಕೂಡ ಬಹುತೇಕ ಇದೆ ಮಾತು. ಪಾಪ ಅನ್ಯಾಯ ಕಂಡ್ರಿ ಅಂತಂದವರು ಬೆರಳೆಣಿಕೆಷ್ಟು ಮಾತ್ರ. ಅವರಿವರ ನಾಲಿಗೆ ಹೊರಳಾಟದ ಶಬ್ದಗಳನ್ನ ಕೇಳುತ್ತಾ ಕುಳಿತಿದ್ದ ನನಗೆ ಕಸಿವಿಸಿ ಆರಂಭವಾಯಿತು. ಜೊತೆಯಲ್ಲಿಯೆ ಹುಟ್ಟಿಕೊಂಡವು ಹತ್ತಾರು ಪ್ರಶ್ನೆಗಳು. ಅವರ ಸಾವಿಗೆ ಅರ್ಥವೆ ಇಲ್ವೆ. ಅವರದ್ದು ದೂಷಿಸುವಂತಹ ಸಾವಾ ? ಅವರ ಸಾವಿಗೆ ನಕರಾತ್ಮಕ ಪ್ರತಿಕ್ರಿಯೆಯೆ ವ್ಯಾಖ್ಯಾನವೆ ಕೊನೆಯೆ ? ಹಾಗಾದ್ರೆ ಒಳ್ಳೇ ಸಾವು ಕೆಟ್ಟ ಸಾವು ಅನ್ನೊದು ಇದಕ್ಕೇನಾ ?

ಸಾಮಾನ್ಯವಾಗಿ ಎಲ್ಲ ರೀತಿಯ ಸಾವಿನಲ್ಲು ಇಂತಹ ಮಾತುಗಳು ಕೇಳೊದಿಲ್ಲ, ಸಹಜವಲ್ಲದ ಸಾವುಗಳಲ್ಲಿ ಮಾತ್ರ ಈ ಮಾತುಗಳ ಅಸ್ತಿತ್ವ ಇರುತ್ತದೆ. ಯಾರಾದರೂ ಕೈ ಯಾರೆ ಪ್ರಾಣ ತೆಗೆದುಕೊಂಡಾಗ ಅನರ್ಥ ಸಾವಿನ ವ್ಯಾಖ್ಯಾನಗಳು ತುಸು ಜಾಸ್ತಿ. ಆತ್ಮಹತ್ಯೆ ಮಾಡಿಕೊಂಡರ ಶವದೆದುರು, ಬೇರೆದಾರಿ ಇರಲಿಲ್ವ, ಸಾಯೋದೆ ಪರಿಹಾರವ ಅಂತ ಪ್ರಶ್ನಿಸುತ್ತಾರೆ. ಸಾಲಮಾಡಿಯೋ ಅಥವಾ ಮಾಡಬಾರದನ್ನ ಮಾಡಿ ಆತ್ಮಹತ್ಯೆ ಮಾಡಿಕೊಂಡರೆ ಮುಗಿದೆ ಹೋಯಿತು. ಹೋದ ಜೀವದ ಮರ್ಯಾದೆಯನ್ನು ಕಳೆಯುತ್ತಾರೆ. ಅವನಿಗೆ ಸಂಬಂಧವಿತ್ತಂತೆ ಅದು ಗೊತ್ತಾಗಿ ಹೋದ, ಸಾಲ ತೀರಿಸದೇನೆ ಸತ್ತ ನರಕಕ್ಕೆ ಹೋಗಲಿ, ಮಾಡಬಾರದನ್ನ ಮಾಡಿದರೆ ಆಗಬಾರದ್ದೆ ಆಗೋದು. ಹೀಗೆ ಸತ್ತ ಹೆಣದ ಸುತ್ತ ನೆರದವರ ,ಸಾವಿನ ಮನೆಯಲ್ಲಿ ಸದ್ದಿಲ್ಲದೆ ಸುಳಿದಾಡುವ ಬಾಯಲ್ಲಿ ಕೇಳುವ ಆಕ್ಷೇಪಾರ್ಹ ಅಭಿಪ್ರಾಯಗಳು ಕುತೂಹಲದ ಜೊತೆಯಲ್ಲಿ, ಸತ್ತವನ ಬಗ್ಗೆ ಜಿಗುಪ್ಸೆಯನ್ನು ಹುಟ್ಟಿಸುತ್ತದೆ.

ಇನ್ನು ವಾಸಿಯಾಗದ, ಬರಬಾರದ ಕಾಯಿಲೆ ಬಂದು ಸತ್ತರೆ ಕೇಳಿಬರುವ ಮಾತು ಇನ್ನಷ್ಟು ವಿಚಿತ್ರವಾಗಿರುತ್ತದೆ. ಕೊಲೆ ಮಾಡಿದ ಆರೋಪಕ್ಕಿಂತಲು ಹೀಗೆ ಸಾಯೋದು ಕೆಟ್ಟದು ಎನ್ನುವಷ್ಟರ ಮಟ್ಟಿಗೆ ಬದುಕಿದ್ದವರು ಸತ್ತವನ ಎದುರು ಮಾತನಾಡಿರುತ್ತಾರೆ. ಸತ್ತವ ಎದ್ದು ಬರಲಾರ ಅನ್ನುವ ಖಾತ್ರಿಯಿಂದಲೊ ಏನೊ, ಕೆಲ ಜಾತಿ ಜನ ಒಂದಷ್ಟು ಇಲ್ಲದನ್ನ ಸೃಷ್ಟಿಸಿ ಕೂಡ ಸತ್ತವನ ಬಗ್ಗೆ ಅಪಶ್ರುತಿ ಹಾಡುತ್ತಾರೆ. ರೌಡಿಯೊಬ್ಬ ಬೀದಿ ಹೆಣವಾದರೂ ಇದೆ ಗತಿ, ಕಳ್ಳನ ಹೆಂಡತಿ ಯಾವತ್ತಿದ್ದರೂ ಮು….. . ಅನ್ನುವ ಮಾತು ಸರಾಗವಾಗಿ ನಾಲಿಗೆಗಳಲ್ಲಿ ತೇಲಾಡಿಬಿಡುತ್ತೆ. ಕುಡಿದು ಸತ್ತರೆ, ಕಳ್ಳನೊಬ್ಬ ಕೊಲೆಯಾದರೆ, ಪ್ರೀತಿಸಿ ಮಡಿದರೆ, ಅನಾಥ ಶವವಾದರೆ, ಮೈಯೆಲ್ಲ ಹುಳುಹಿಡಿದು ಮರಣ ಹೊಂದಿದರೆ, ಸತ್ತವರು ಮತ್ತು ಸತ್ತವರ ಕುಟುಂಬ, ವಿನಾಕಾರಣ ಸಂಬಂಧಿಕರು ಸೇರಿದಂತೆ, ನೆರೆಹೊರೆ ಪರಿಚಿತರಿಂದ ಇವುಗಳನ್ನ ಕೇಳಬೇಕಾಗುತ್ತದೆ. ದುರದೃಷ್ಟವೆಂದರೆ ಇಂತಹ ಪರಿಸ್ಥಿತಿಯೆನ್ನೆದುರಿಸುವುದು ಸತ್ತವನ ಕುಟುಂಬಕ್ಕೆ ಅನಿವಾರ್ಯ ಕರ್ಮ, ಸಂಬಂಧಿಕರಿಗೆ ತಪ್ಪದ ಮುಜುಗರ. ಕಳೆದು ಹೋದ ಜೀವ ಮಾತ್ರ ಎಲ್ಲದರಿಂದ, ಎಲ್ಲರಿಂದಲೂ ತಪ್ಪಿಸಿಕೊಂಡು ಶಾಂತವಾಗಿ ಮಲಗಿರುತ್ತೆ.

ಕೆಲವೊಮ್ಮೆ ಸಾವಾದ ಮನೆಯಲ್ಲಿ ಉತ್ತಮ ಮಾತುಗಳು ಕೇಳುವುದುಂಟು, ಸತ್ತವನು ಬಡಪಾಯಿ ಆಗಿದ್ದರೆ, ಸುತ್ತಮುತ್ತಲಿನ ಪರಿಸರದಲ್ಲಿ ಒಳ್ಳೆಯವನೆಸಿದ್ದರೆ ,ಒಂದಿಷ್ಟು ಹೇಸರು ಮಾಡಿದ್ದರೆ, ಅಯ್ಯೊ ಪಾಪ ಹೀಗಾಗಬಾರದಿತ್ತು ಎಂಬ ವಿಶೆಷಣಗಳೊಂದಿಗೆ ಅನುಕಂಪ ವ್ಯಕ್ತವಾಗುತ್ತದೆ. ಮತ್ತೆ ಕೆಲ ವಿಶೇಷವ್ಯಕ್ತಿಗಳು ಸಹ  ಈ ಸಾವಿನ ವ್ಯಂಗ್ಯೋಕ್ತಿಯಿಂದ ಪಾರಾಗಿ ಸ್ವರ್ಗ ಸೇರಿಕೊಳ್ಳುತ್ತಾರೆ. ಸಾಧನೆಗೆ ತಕ್ಕ ಗೌರವವನ್ನ , ಸಾಧಕರು ಸಾವಿನ ನಂತರವೂ ಪಡೆದುಕೊಳ್ಳುವುದರಿಂದ ಅವರು ಸಹ ಟೀಕಾ ನಾಲಿಗೆಯಿಂದ ಮುಕ್ತ ಮುಕ್ತ. ಉಳಿದಂತೆ ಪಾಪ ಕಂಡ್ರಿ ಹೀಗಾಯಿತಲ್ಲಾ ಅನ್ನುವ ಪೀಠಿಕೆಯಿಂದಲೆ ಮರಣ ವಿಮರ್ಶೆಗಳು ಆರಂಭಗೊಂಡಿರುತ್ತದೆ . ಸಂಬಂಧದ ಸರಪಳಿಗಳು, ಇಂತಹ ಸಾವುಗಳು ಸಂಭವಿಸದಾಗೆಲೆಲ್ಲ, ತಮ್ಮ ಮೂಗಿನ ನೇರದ ಥಿಸೀಸನ್ನ ಮಂಡಿಸಿ ಪಕ್ಕಕ್ಕೆ ಸರಿದುಬಿಟ್ಟಿರುತ್ತವೆ. ಮತ್ತೆ ಅದರ ಗುನಗಾಟ ಆರಂಭಗೊಳ್ಳುವುದು ಮತ್ತೊಂದು ಕೆಟ್ಟ ಸಾವು ಆದಾಗಲೆ.

ಸಾವು ಎಲ್ಲರಿಗೂ ಒಂದೆಯಾಗಿರುತ್ತೆ ಅನ್ನೊದು ಸಾರ್ವಕಾಲಿಕ ಸತ್ಯ. ಸ್ವರ್ಗ ನರಕಗಳ ಕಲ್ಪನೆಯಿದೆಯಾದರೂ ಸಾವು ಮಾತ್ರ ಉಸಿರು ನಿಲ್ಲಿಸಿಯೆ ಸಾಯುತ್ತದೆ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರ ಸಾವನ್ನ ವ್ಯಾಖ್ಯಾನಿಸುತ್ತದೆ, ತನ್ನದೆ ರೀತಿಯಲ್ಲಿ ಅರ್ಥೈಯಿಸುತ್ತದೆ, ಕೆಟ್ಟ ಸಾವನ್ನ ಟೀಕಿಸುತ್ತದೆ, ಕಣ್ಣೀರ ಕರೆದು ಸಿಂಪತಿ ಮೂಡಿಸುತ್ತದೆ. ಬದುಕಿದ್ದವರ ದೃಷ್ಟಿಯಲ್ಲಿ, ನಿರ್ಯಾತ ಸಾವಿಗೊಂದು ಅರ್ಥ ಬರೋದು ಅಂತ ಆಗಲೆ ಅಂತ ಕಾಣುತ್ತೆ. ಒಳ್ಳೆಯ ಗುಣವಾಚಕಗಳನ್ನ ಕೇಳುವಷ್ಟು ಕೆಲಸವನ್ನ ಸಾವಿಗೆ ಮೊದಲು ಮಾಡಿದ್ದರೆ ಓಕೆ, ದುರ್ಬುದ್ದಿಯ ದ್ಯೋತಕನಿಗೆ ತೆಗಳಿಕೆಯೆ ಗಟ್ಟಿ. ಇನ್ನು ಸಮಾಜದಲ್ಲಿ ಸತ್ತವರ ಮನೆಯ ದುಃಖ ಹಂಚಿಕೊಳ್ಳಲು ಆಗದಿದ್ದರೂ, ಸತ್ತವನ ಸಾವಿಗೆ ಮತ್ತು ಆತ್ಮಕ್ಕೆ ಹೀಗೀಗೆ ಅಂತ ಸರ್ಟಿಪಿಕೆಟ್ ಕೊಟ್ಟು ಮಾಯವಾಗುವ ಜನರನ್ನ ಗುರುತಿಸೋದು ಕೂಡ ಕಷ್ಟ. ಅವರ ಸ್ವಭಾವ ಎಲ್ಲೆಡೆ ಒಂದೆ ರೀತಿಯಾಗಿರುವುದಿಲ್ಲ. ಅಷ್ಟೆ ಯಾಕೆ, ಏಕೆ ಸತ್ತವರ ಹೀಗಳೆಯುತ್ತಿರಿ ಅಂದರೆ, ಮೃತ್ಯು ವಿಮರ್ಶಕರಿಂದ ಉತ್ತರವು ಸಿಗುವುದಿಲ್ಲ. ಸತ್ತ ದೇಹಕ್ಕೆ ಮುಕ್ತಿ ಕಾಣಿಸೋವರೆಗೆ ಕೇಳಿಸಿಕೊಂಡು ಸುಮ್ಮನಾಗಬೇಕಷ್ಟೆ.

ಇವೆಲ್ಲದರ ಮದ್ಯೆ ಒಮ್ಮೊಮ್ಮೆ ತಮ್ಮದಲ್ಲದ ತಪ್ಪಿಗೆ ತಮ್ಮ ಸಾವನ್ನ ಹೀಗೆ ಟೀಕಾಕಾರರ ಕೈಯಲ್ಲಿ ಕೊಡುವವರ ಕಂಡಾಗ ಮನಸ್ಸಿಗೆ ಕೊಂಚ ಬೇಸರವಾಗುತ್ತದೆ. ಜೋಗದಲ್ಲಿ ಬಿದ್ದು ಸತ್ತವರದ್ದು ಇದೆ ಪರಿಸ್ಥಿತಿ, ವಿನಾಕಾರಣ ಅವರ ತಪ್ಪನ್ನ ಎಣಿಸಿ ಸತ್ತವರನ್ನ ದೋಷಿಯನ್ನಾಗಿಸಿದೆ ಈ ಬದುಕ್ಕಿದ್ದವರ ಪ್ರಪಂಚ. ಆದರೆ ಬಿದ್ದಗುಂಡಿಯಿಂದ ಎದ್ದು ಬಂದು ನಮ್ಮದು ತಪ್ಪಿಲ್ಲ ಅನ್ನೊಕೆ ಅವರಲ್ಲಿ ಪ್ರಾಣವಿಲ್ಲ. ಅಲ್ಲಿ ಸಾವಿದೆ ಅನ್ನೊದು ಅವರಿಗೂ ಗೊತ್ತಿತ್ತು ನಿಜ, ಆದರೆ ಅದು ತಮ್ಮನ್ನೆ ಎಳೆದು ಬೀಳಿಸುತ್ತೆ ಅನ್ನೊದು ಅವರಿಗೂ ಗೊತ್ತಿರಲಿಲ್ಲ, ಗೊತ್ತಿರಲು ಸಾದ್ಯವು ಇಲ್ಲ ಬಿಡಿ. ಇವೆಲ್ಲಾ ಗೊತ್ತಿದ್ದೂ ಟೀಕಿಸುತ್ತೇವೆ. ನಮ್ಮ ಬುದ್ದಿಗೆ  ಏನನ್ನಬೇಕು . ಸಿಕ್ಕ ಸಿಕ್ಕಲ್ಲಿ ಹೊಂಚುಹಾಕಿ, ಕೊರಳಿಗೆ ಬಳ್ಳಿ ಸುತ್ತಿ ಎಳೆಯುವ ವಿಧಿಯೆ, ಸ್ಪಷ್ಟವಾಗಿ ಉತ್ತರಿಸಬೇಕು .

ಕಾಡುವಾಸಿಗಳ ಸಂಕಟ ನನ್ನೊಳಗೆ ಕುದ್ದು ಹೊರಬಂದ ಲೇಖನ( ಪಂಜು ಆನ್​ಲೈನ್​ನಲ್ಲಿ ಬರೆದ ಹಳೆ ಲೇಖನ)

ನಮಗೆ ನೀರು ಬೇಡ, ರಸ್ತೆ ಬೇಡ, ಮನೆಯೂ ಬೇಡ, ಸ್ವಾತಂತ್ರ್ಯದ ಗುರುತಿನ ಒಂದೇ ಒಂದು ಪತ್ರ ಬೇಡ. ನಿಮ್ಮ ಸವಲತ್ತುಗಳು ನಿಮಗೆ ಇರಲಿ. ನಮ್ಮನ್ನ ಬದುಕಲು ಬಿಡಿ. ಕಾಡು ಕಾಯುವವರು ನಾವು ನಮಗೆ ಸಾಮಾಜಿಕ ನ್ಯಾಯ ಕೊಡಿ. ಹಸಿರುಟ್ಟ ಹಾಡಿಯಲ್ಲಿ, ನೆಮ್ಮದಿಯ ಬದುಕಿಗಾಗಿ ಹಾತೊರೆಯುತ್ತಿರುವ ಆದಿವಾಸಿಗಳ ಅಹವಾಲಿದು..ಬದಕಲು ಬಿಡಿ ಅಂತ ಅಂಗಲಾಚುತ್ತಿರುವ ಪರಿಯಿದು…ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತ್ವಾರಣಾ. ಶೋಷಣೆ ವಿರುದ್ಧದ  ಈ ಹಾಡು ಮಲೆನಾಡ  ಮಡಿಲೊಳಗೆ ಹರಡಿದ ಕಾಡು ದರಲೆ ಮೇಲೆ ನೆತ್ತರ ಹರಿಸಿದ್ದು, ಈಗ ಇತಿಹಾಸ.. ಆದ್ರೆ ಅದರಿಂದ ಸಿಕ್ಕಿದೇನು ..? ಉತ್ತರ  ಇಂದಿಗೂ ಸಿಕ್ಕಿಲ್ಲ.

ಇರಲಿ ಬಿಡಿ ಕೊನೆ ಪಕ್ಷ ಹೋರಾಟದ ಉದ್ಧೇಶವೆನಿಸಿದ್ದ ಅಸಮಾನತೆಯಾದ್ರೂ ನಿವಾರಣೆಯಾಯಿತು ಅಂದುಕೊಂಡ್ರೆ ಅದು ಕೂಡ ಆಗಿಲ್ಲ. ಸ್ವರೂಪ ಮಾತ್ರ ಬದಲಾಗಿದೆ. ಮೇಲ್ವರ್ಗದ ಶೋಷಣೆ ಕಡಿಮೆಯಾದ್ರೂ, ಕಾರ್ಯಾಂಗದ ತುಳಿತ ಮಿತಿಮೀರುತ್ತಿದೆ. ಆದಿವಾಸಿಗಳು ಅಧಿಕಾರಿಗಳ ದೌರ್ಜನ್ಯದಿಂದಾಗಿ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ತಣ್ಣನೆಯ ಕ್ರೌರ್ಯಕ್ಕೆ ಬದುಕಿನ ಹಕ್ಕನ್ನೇ ಬಿಟ್ಟುಕೊಡಬೇಕಾಗಿದೆ. ಇದೆಂತಹ ನ್ಯಾಯ ಸ್ವಾಮಿ ಅನ್ನುವ ಹಾಗಿಲ್ಲ. ತಪ್ಪಿದಲ್ಲಿ ಕಾಡೊಳಗಿಲ್ಲದ ಶಿಕ್ಷೆ ನಾಡು ನೀಡುತ್ತೆ. ಮತ್ತೆ ಕಾಡಿಗೆ ಬರದಂತೆ ಕೇಸು ಬೀಳುತ್ತೆ. ಒಂಬತ್ತು ಜಿಲ್ಲೆ 23 ಗ್ರಾಮಗಳ ಆದಿವಾಸಿ ಕುಟುಂಬಗಳ ಪರಿಸ್ಥಿತಿಯಿದು.

ನಾಡಿನಲ್ಲಿನ ಮಂದಿಗೆ ಬದುಕೋಕೆ ನಾನಾ ದಾರಿ. ಕಾಡುಮಕ್ಕಳಿಗೆ ಕಾಡೊಂದೇ ಬದುಕಿನ ಹಾದಿ. ಆದ್ರೆ ತಾನು ಹುಟ್ಟಿ ಬೆಳೆದ ಕಾಡಿಗೀಗ ಆದಿವಾಸಿ ಹೋಗುವ ಹಾಗಿಲ್ಲ. ಕಾಡೊಳಗಿಟ್ಟ ಸಿ.ಸಿ ಟೀವಿ, ಕಾಡುವಾಸಿಗಳನ್ನ ಹದ್ದಿನ ಕಣ್ಣಿಟ್ಟು ಕಾಯುತ್ತಿದೆ. ಅಪ್ಪಿತಪ್ಪಿ ಕಾಡಿಗೆ ಹೋದರೂ ,ಅರಣ್ಯ ಇಲಾಖೆ ಮನೆಗೆ ಬಂದು ಕೇಸು ಜಡಿಯುತ್ತಿದೆ. ಗೊತ್ತೆ ಇಲ್ಲದ ದೆಹಲಿ ಡೈರಿಯಲ್ಲಿರೋ ಅರಣ್ಯ ಕಾನೂನನ್ನ ತೋರಿಸಿ ಫಾರೆಸ್ಟ್ ಇಲಾಖೆ, ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಬೆದರಿಕೆ ಹಾಕುತ್ತಿದೆ. ಇದು ಸಾಲದೆಂಬಂತೆ ಸೊಪ್ಪು, ಸೌದೆ, ಹಣ್ಣು, ಮೂಲಿಕೆ, ಜೇನು, ಯಾವುದನ್ನೂ ಸಂಗ್ರಹಿಸಲು ಇಲಾಖೆ ಬಿಡುತ್ತಿಲ್ಲ. ಬೇಟೆಗೆ ನಿಷೇಧವಿದ್ರೆ, ಮೀನು ಹಿಡಿಯೋದಕ್ಕೆ ಅಬ್ಜೆಕ್ಷನ್ ಇದೆ. ಬೆಳೆ ಬೆಳೆಯೋಕೆ ವಿರೋಧವಿದೆ. ನಂಬಿದ ಕಾಡುದೇವರು ಕೂಡ ಅರಣ್ಯ ಇಲಾಖೆಗೆ ಹೆದರಿ ಕುಳಿತಿದ್ದಾನೆ. ಪ್ರತಿಭಟಿಸಿದ್ರೆ ದೌರ್ಜನ್ಯ ಎದುರಿಸಬೇಕು.

ಮೊದಲೆಲ್ಲಾ ಹೀಗಿರಲಿಲ್ಲ. ಕಾಡಿನ ರಂಗಪ್ರವೇಶ ಸಲೀಸಾಗಿತ್ತು. ಹಕ್ಕಿಯ ಗಿಜಿಗಿಜಿಯಿಂದ ಹಿಡಿದು,ತರಗಲೆಯ ಸದ್ದಿನವರೆಗೆ, ಆದಿವಾಸಿಗಳು ಕಥೆ ಕಟ್ಟುತ್ತಿದ್ದರು.ಆದ್ರೆ ಕಾಲ ಬದಲಾಗುತ್ತಾ ಪಶ್ಚಿಮ ಘಟ್ಟದಲ್ಲಿ ದೇಶಾಭಿವೃದ್ಧಿಯ ಯೋಜನೆಗಳನ್ನ ಶುರುವಿಟ್ಟುಕೊಂಡಿತು  ಸರ್ಕಾರ. ಅದಕ್ಕೆ ಅಡ್ಡವಾದವರು ಆದಿವಾಸಿಗಳು. ಹೀಗಾಗಿ ಸಂರಕ್ಷಣೆಯ ಹೆಸರಲ್ಲಿ ಅಭಯಾರಣ್ಯಗಳು ತಲೆ ಎತ್ತಿದವು. ಪರಿಣಾಮ ಭೂತಕಾಲದಲ್ಲಿ ಲೀನವಾದ ವರ್ತಮಾನಗಳು ತನ್ನೊಂದಿಗೆ ಆದಿವಾಸಿಗಳ ಬದಕನ್ನೂ ನುಂಗುತ್ತಲೇ ಇದೆ. ಇದೀಗ ಅಳಿದುಳಿದ ಅಲ್ಪಸಂಖ್ಯಾತರನ್ನ ಭವಿಷ್ಯ ಕಾಡುತ್ತಿದೆ..

ಈ ದೇಶದ ಕಾನೂನು ಸ್ವಚ್ಚಂದ ಬದುಕಿನ ಹಕ್ಕನ್ನ ಆದಿವಾಸಿಗಳಿಗೆ ನೀಡಿದೆ. ಆದರೂ ಭಾರತದ ಜನಸಂಖ್ಯೆಯ ಶೆಕಡಾ ಆರರಷ್ಟು ನಿಸರ್ಗ ಮಕ್ಕಳು ಬಹುತೇಕ ಇದೆ ಸಮಸ್ಯೆಗಳನ್ನ ಎದರಿಸುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ಪಶ್ಚಿಮಘಟ್ಟ ಸಾಲಿನ ಒಂಬತ್ತು ಜಿಲ್ಲೆಗಳು ಒಳಗೊಂಡಿದೆ. ಅನುಸೂಚಿತ ಬುಡಕಟ್ಟುಗಳ ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯಹಕ್ಕು ( ಮಾನ್ಯತಾ) ಕಾಯಿದೆ 2006 ಮತ್ತು 2008 ರ ನಿಯಮದ ಪ್ರಕಾರ ಆದಿವಾಸಿಗಳಿಗೆ ಮಾನ್ಯತಾ ಹಕ್ಕಿದೆ. ಅದರ ಪ್ರಕಾರ ಸೊಪ್ಪು ಸವರುದರಿಂದ ಹಿಡಿದು ಸ್ವಂತ ಮನೆಕಟ್ಟಿ ಸಾಗುವಳಿ ಮಾಡುವರೆಗೂ ಆದಿವಾಸಿಗಳ ಹಕ್ಕನ್ನ ಕಿತ್ತುಕೊಳ್ಳುವ ಹಾಗಿಲ್ಲ. ವಿಪರ್ಯಾಸ ಅಂದ್ರೆ ಈ ಕೇಂದ್ರ ಕಾನೂನಿನ ವ್ಯಾಪ್ತಿ ಹಾಗೂ ಅರಿವು ಚರ್ಚೆಯಾಗುತ್ತಿಲ್ಲ. ಉನ್ನತ ಮಟ್ಟದ ಅಧಿಕಾರಿಗಳೂ ಇದನ್ನ ಒಪ್ಪಿಕೊಳ್ಳುತ್ತಾರೆ. ಆದ್ರೆ ,ಅದೆ ಸಮಯದಲ್ಲಿ ಕಾನೂನಿನ ಅನುಷ್ಟಾನದ ಮಾತನ್ನ ಮರೆತು ಬಿಡುತ್ತಾರೆ. ದಿಕ್ಕು ತಪ್ಪುವುದೇ ಇಲ್ಲಿ. ಅಧಿಕಾರಿಗಳ ಭರವಸೆಯನ್ನ  ನಂಬಿ ಕೈಮುಗಿಯುವ ನೆಲದ ಮಕ್ಕಳು, ಕಾನೂನಿನ ಬಗ್ಗೆ ಅರಿಯಲು ಸಹ ಮುಂದಾಗುವುದಿಲ್ಲ. ಪರಿಣಾಮ ಅರಣ್ಯವಾಸಿಗಳಿಗೆ ಸಂಕಷ್ಟ ಕೊನೆಯಾಗುತ್ತಿಲ್ಲ..

ಇನ್ನು, ನೊಂದವರ ನೋವು ನಿವಾರಿಸುತ್ತೇವೆ ಎಂದು ಬರುವ ನಾಡಿನ ಜನಪ್ರತಿನಿಧಿಗಳು ಮತ್ತೆ ಹಾಡಿಯತ್ತ ಹೆಜ್ಜೆ ಹಾಕೋದು ಚುನಾವಣೆ ಸಮಯದಲ್ಲೆ. ಅಲ್ಲಿಯವರೆಗೂ ಅಧಿಕಾರದ ಅಹಮ್ಮಿನಡಿಯಲ್ಲೆ ಬದುಕಬೇಕು ಆದಿವಾಸಿಗಳು. ಕಾಡುಮೃಗಳಿಗೂ ಅಂಜದೆ ಅಳ್ಳೆದೆಯ ಮಂದಿಯಲ್ಲಿ ಅಳುಕು ಹುಟ್ಟಿಸಿದೆ, ಕಾನೂನು ಬದ್ದ ದೌರ್ಜನ್ಯ. ಸಮಾನತೆ ಇನ್ನೂ ಸಿಕ್ಕಿಲ್ಲ. ಆದಿವಾಸಿಗಳ ಅರಣ್ಯರೋಧನ  ಯಾರಿಗೂ ಕೇಳುತ್ತಿಲ್ಲ. ಬುಡಕಟ್ಟಿನ ಬದುಕಿಗೆ ಹೋರಾಡಿ ಮಡಿದ ಅಲ್ಲೂರಿಯ ಒಡಲುರಿ ಆರುತ್ತಿಲ್ಲ‘..

ಅರ್ಥವಾಗದಿದ್ದು….!?

ವಿಧಿಯ ಸುಡಲಾಗದೆ ಆ ರವಿಯೇ,
ಪಡುವಣದಿ ಮರೆಯಾಗಿಹನು
ನಾ ತಾನೆ ಏನು ಮಾಡಲಿ ಹೇಳು ಬದುಕೆ
ಸಂತೈಸಿಕೋ.. ನನ್ನ
ಕತ್ತಲು ಕರಿಗ ಬೆಳಕು ಮೂಡುವ ತನಕ..
=========
ನಿರೀಕ್ಷಿಸುತ್ತಿದ್ದ ಕಾಲವೇ
ನನ್ನೆದುರು ನಿಂತು ದಾರಿ ತೋರುತಿದೆ..
ಅಮ್ಮನ ಅಮವಾಸ್ಯೆ ಮತ್ತವಳ
ಬೂದಿ ಭವಿಷ್ಯ ಪಯಣಕ್ಕಡ್ಡವಾಗಿದೆ..
ವಿಧಿ ವಿರ್ಪಯಾಸ ಅಂದ್ರೆ ಇದೆ ಇರಬೇಕಾ ಅಂತ..
==============
ಕಳೆದ ದಿನದಲ್ಲಿ ಸಿಗದ ಉತ್ತರವ
ಕೈಕೊಟ್ಟು ಹುಡುಕುತ್ತಿದೆ ಭವಿಷ್ಯದಲ್ಲಿ
ಈ ಕಾಲದ ಹರೆಯ..
ಫಲಿಸುವುದೇ ಜೋತಿಷ್ಯ.. ?
===============
ನಿನ್ನ ನೆನಪಿನಂಗಳದಲ್ಲಿ
ಅಳಿಸಾಗದೇ ಉಳಿಸಿದ್ದು
ನನ್ನ ಕನಸಿನ ಹೆಜ್ಜೆಯನ್ನು ಮಾತ್ರ..
=========
ಕನ್ನಡಿಯಲ್ಲಿ ಬಿತ್ತರಗೊಂಡು
ನಗುತ್ತಿದ್ದ ಕನಸುಗಳು
ಈ ಜಗದೆದುರಲ್ಲಿ
ದುಗುಡವಾಗಿ ಕಾಡುತ್ತಿದೆ…
=============
ನೀ ಜಾರಣಿಯ,ಪ್ರತಿವೃತೆಯೋ
ನನಗದು ಅನಾವಶ್ಯಕ…
ಸೆಳೆಯುವ ನಿನ್ನ ಸೌಂದರ್ಯ
ಕಿಚ್ಚೆಬ್ಬಿಸುವ ಅಮಲ
ಸವಿಯದೆ ಬಿಟ್ಟರೆ ನಾ ಕೆಟ್ಟೆ,
ಸೋತರೆ ಸಾವೆ ಮತ್ತೆ…
ಹು..ಹೂ.. ನಾನ್ಯಾಕೆ ಸೋಲೊಪ್ಪಲಿ..
ನಿನ್ನ ಗಳಿಸಿಯೇ ಮೇಲೆರುತ್ತೇನೆ,
ಸಾಧನೆಯ ಮನೆ ತಲುಪುತ್ತೇನೆ..
ಇದೇ ನನ್ನ ಶಪಥ.. ಕಿವಿಗೊಟ್ಟು ಕೇಳು ಓ ಬದುಕೆ..
================
ವಿಧಿಯ ಸುಡಲಾಗದೆ ಆ ರವಿಯೇ,
ಪಡುವಣದಿ ಮರೆಯಾಗಿಹನು
ನಾ ತಾನೆ ಏನು ಮಾಡಲಿ ಹೇಳು ಬದುಕೆ
ಸಂತೈಸಿಕೋ.. ನನ್ನ
ಕತ್ತಲು ಕರಿಗ ಬೆಳಕು ಮೂಡುವ ತನಕ..
=========
ನಿರೀಕ್ಷಿಸುತ್ತಿದ್ದ ಕಾಲವೇ
ನನ್ನೆದುರು ನಿಂತು ದಾರಿ ತೋರುತಿದೆ..
ಅಮ್ಮನ ಅಮವಾಸ್ಯೆ ಮತ್ತವಳ
ಬೂದಿ ಭವಿಷ್ಯ ಪಯಣಕ್ಕಡ್ಡವಾಗಿದೆ..
ವಿಧಿ ವಿರ್ಪಯಾಸ ಅಂದ್ರೆ ಇದೆ ಇರಬೇಕಾ ಅಂತ..
==============
ಕಳೆದ ದಿನದಲ್ಲಿ ಸಿಗದ ಉತ್ತರವ
ಕೈಕೊಟ್ಟು ಹುಡುಕುತ್ತಿದೆ ಭವಿಷ್ಯದಲ್ಲಿ
ಈ ಕಾಲದ ಹರೆಯ..
ಫಲಿಸುವುದೇ ಜೋತಿಷ್ಯ.. ?
===============
ನಿನ್ನ ನೆನಪಿನಂಗಳದಲ್ಲಿ
ಅಳಿಸಾಗದೇ ಉಳಿಸಿದ್ದು
ನನ್ನ ಕನಸಿನ ಹೆಜ್ಜೆಯನ್ನು ಮಾತ್ರ..
=========
ಕನ್ನಡಿಯಲ್ಲಿ ಬಿತ್ತರಗೊಂಡು
ನಗುತ್ತಿದ್ದ ಕನಸುಗಳು
ಈ ಜಗದೆದುರಲ್ಲಿ
ದುಗುಡವಾಗಿ ಕಾಡುತ್ತಿದೆ…
=============
ನೀ ಜಾರಣಿಯ,ಪ್ರತಿವೃತೆಯೋ
ನನಗದು ಅನಾವಶ್ಯಕ…
ಸೆಳೆಯುವ ನಿನ್ನ ಸೌಂದರ್ಯ
ಕಿಚ್ಚೆಬ್ಬಿಸುವ ಅಮಲ
ಸವಿಯದೆ ಬಿಟ್ಟರೆ ನಾ ಕೆಟ್ಟೆ,
ಸೋತರೆ ಸಾವೆ ಮತ್ತೆ…
ಹು..ಹೂ.. ನಾನ್ಯಾಕೆ ಸೋಲೊಪ್ಪಲಿ..
ನಿನ್ನ ಗಳಿಸಿಯೇ ಮೇಲೆರುತ್ತೇನೆ,
ಸಾಧನೆಯ ಮನೆ ತಲುಪುತ್ತೇನೆ..
ಇದೇ ನನ್ನ ಶಪಥ.. ಕಿವಿಗೊಟ್ಟು ಕೇಳು ಓ ಬದುಕೆ..
================

ನೆನಪಿನಂಗಳ

ನಿಜ ಗೆಳತಿ,

ನಾವಿಬ್ಬರೂ ಪ್ರೀತಿಸಿದ್ದೆವು

ನಾಳಿನ ಬದುಕಿಗೆ ಕನಸ ಬಿತ್ತಿದ್ದೆವು

ಒಲವ ನೋವ ಹರಿಯಗೊಡದೇ

ಶೃಂಗಾರದ ಪಾತಿ ಕಟ್ಟಿದ್ದೆವು..

ಆದರೆನಾಯ್ತು ಗೊತ್ತಲ್ಲ

ಅದ್ಯಾರ ಶಾಪ ತಟ್ಟಿತೋ ಕಾಣೆ

ಕನಸು ಚಿಗುರಿ

ಕುಡಿಯೊಡೆದ ವಾಸ್ಥವಕೆ ನೀ ನಿರೆರೆಯಲೇ ಇಲ್ಲ..

ನಿರೀಕ್ಷೆಯ ಸಸಿ ಒಣಗಿ ಜೀವನ ಅರಳಲಿಲ್ಲ..

 

ಇರಲಿಬಿಡು ಈಗ

ನಂಬಿಕೆಗಳೆಲ್ಲಾ ನಶಿಸಿ,

ನೆನಪಿನಂಗಳ ಖಾಲಿಯಿದೆ

ಹೊಸ ಹಂಬಲದಲಿ ಮರೆವಿನ ಮನೆ ಕಟ್ಟುವೆ

ಅಳಿದುಳಿದ ಅವಶೇಷಗಳ ಆರಿಸಿಡುವೆ..

ಸರಿವ ಕಾಲದಿ ಸಿಕ್ಕರೆ ಒಳಹೊಕ್ಕಿ ಹೋಗು..

ಹತ್ತ ಮರ್ಲ್​..!?

ಮುಂಜಾನೆ ಬಂದು, ಸಂಜೆಯಲಿ
ಮರೆಯಾಗುವ ಹಗಲು ನಾನು..
ನಿದ್ದೆಯ ಗೂಡಲಿ, ಮನ ನೆನೆ ನೆನೆಸಿ
ರೆಪ್ಪೆ ತೆರೆಯುತ್ತಲೆ ಮರೆಯಾಗುವ ಕನಸು ನೀನು

================

ಬಿಸಿಲ ಸೆರಗಲ್ಲಿ,
ನೆರಳ ಮುಖವಾಡ.
ತೇವದ ಎದೆ , ಅಳುವ ಕಣ್ಣು,
ಮೋಸದ ಜಗದಲಿ
ನಂಬಿಕೆಯ ನಾಟಕ.
ಗೆಳತಿ,
ನೀನಾದರೂ ಇರಬಾರದಿತ್ತೆ,
ಬಾವ ಬರಿದಾದ ಹೊತ್ತಿನಲಿ.,
ಬದುಕು ಹೇಳಿಕೊಡಲು…..

==============

ಪ್ರೇಮ ಕರ್ಪೂರ ಪುತ್ತಳಿಯ,
ಅಗ್ನಿಯ ಸಿಂಹಾಸನದಲ್ಲಿರಿಸಿ
ಹೊತ್ತಿದ ಬೆಳಕಲ್ಲಿ
ಗೆಳತನವ ಬಯಸಿದವಳು
ನೀನಲ್ಲವೆ …. ಗೆಳತಿ

================

ಸಾಗರ ಸೇರುವ ಧಾವಂತದಲಿ,
ಹರಿವ ನದಿಯಂತೆ,ಪ್ರೀತಿಸಿದೆ ನನ್ನ
ನೀ ಪ್ರೀತಿಸುವ ಪರಿಯ ಸಹಿಸಲಾಗದೆ,
ಕೊಂದು ಬಿಟ್ಟೆ ನಾ ನಿನ್ನೊಲವನ್ನ

===============

ಕಣ್ಗಳಲಿ ಹುಟ್ಟಿ,
ಮಾತಲ್ಲೆ ನಡೆ ಕಲಿತು
ಎದೆಯಾಳವ ಹೊಕ್ಕಿ
ಮನದ ಹುಣ್ಣಾಗಿಸುವ
ಓ.. ಪ್ರೀತಿಯೆ
ನೀ ಮನಗೆ ಬಂದ ಮಾರಿ..

====================

ವಿದಾಯದ ಪತ್ರ…(ಕ್ರಿಕೆಟ್​ನಿಂದ ಸಚಿನ್​ ನಿವೃತ್ತಿಯಾದಾಗ ಸ್ಟೋರಿಗಾಗಿ ಬರೆದಿದ್ದು)

ಕ್ರಿಕೆಟ್ ಸಾಮ್ರಾಜ್ಯದ ಅಶೋಕ, ಸನ್ಯಾಸ ತೆಗೆದುಕೊಂಡು ಅಂಗಳದಿಂದ ಹೊರಟ ನೀನು ದೇವನಾಂಪ್ರಿಯ ನಿಜ. ಆದರೆ ದೇವರಲ್ಲ, ದೇವರ ರೂಪದಲ್ಲಿರೋ ಮಾನವ .. ನಿನ್ನೊಳಗೆ ನನ್ನ ನಾ ಕಂಡಿದ್ದೆ, ನಿನ್ನ ಮೆಚ್ಚಿ ಕುಣಿದಾಡಿದ್ದೆ ಹುಚ್ಚೆಬ್ಬಿಸಿಸುವ ಆಟವನ್ನ ಇಪ್ಪನಾಲ್ಕು ವರ್ಷ ಉಣಭಡಿಸಿದ ನಿನಗಿದೋ ನನ್ನ ನಮನ ………………

ಸಂತಾಪಕ್ಕೆ ಬಿದ್ದ ಮೋಡ ಮೆಲ್ಲಗೆ ಹನಿಯುತ್ತಿದೆ. ಕವಿತೆ ಹುಟ್ಟುವ ಸಮಯ, ಅದ್ಯಾಕೋ ಗೊತ್ತಿಲ್ಲ ,ಮನಸ್ಸು ಮಾತ್ರ ಭಾರವಾಗಿದೆ, ಬರೆಯುವ ಮನಸ್ಸಿಲ್ಲ. ಒಲವ ಕಳೆದುಕೊಂಡ ಪ್ರೇಮಿಯಂತ ಪರಿಸ್ಥಿತಿ ನನ್ನದು. ಬರೆಯುವ ಕೈಗಳಿಗೂ, ಹಿಡಿದ ಲೇಖನಿಯ ನಡುವೆ, ಒಂದೆ ತಾಕಲಾಟ.ಎದೆಯಾಳದ ತುಂಬೆಲ್ಲಾ, ನೆನಪುಗಳ ಜೋಲಿ, ಶಾಂತ ಸಾಗರದಲ್ಲಿ ರೌದ್ರತೆ ಸೃಷ್ಟಿಸಿದ ಸುನಾಮಿಯಂತೆ, ಅಲೆಯೆಬ್ಬಿಸಿದೆ ನೀನಾಡಿದ ಕೊನೆಮಾತು …

ನಿನ್ನೊಳಿಗಿನ ತೊಳಲಾಟವನ್ನೆಲ್ಲ ,ಕಳೆದ ಕಾಲದಲ್ಲಿ ಹಿಡಿದಿಟ್ಟ ಭಾವವನ್ನ , ಅನುಭವ ಕಟ್ಟಿಕೊಟ್ಟ ಬದುಕನ್ನ , ನನಸಾಗಿಸಿದ ಕನಸನ್ನ , ಹಿಡಿ ಪ್ರೀತಿಯ ಜೊತೆ ಮಾತಲ್ಲೇ ಹರಡಿಬಿಬಿಟ್ಟೆಯಲ್ಲಾ . ಅದು ಕೂಡ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ. ಎಲ್ಲಿಟ್ಟಿದ್ದೆ ಇಷ್ಟು ದಿವಸ ಆ ಮಾತುಗಳೆನ್ನೆಲ್ಲಾ , ? ಆಟದ ಭರದಲ್ಲಿ ಮಾತು ಮೌನವಾಗಿತ್ತಾ ? ಹೇಳು ಪ್ಲೀಸ್ ?

ನಿನ್ನೊಳಗಿನ ಅದ್ಬುತ ಮಾತುಗಾರ ಹೊರಬರಲು ಇಪ್ಪತ್ತೈದು ವರ್ಷಗಳೆ ಬೇಕಾಯಿತಾ ? ಅದೇನು ಸುಮ್ಮನೆ ಆ ಕಿವಿಯಿಂದ ಈ ಕಿವಿಗೆ ಕೇಳಿ ಬಿಡುವಂತ ಮಾತೇ ನಿನಾಡಿದ್ದು ಇಲ್ಲ ಖಂಡಿತ ಇಲ್ಲ. ನನ್ನ ಪಾಲಿಗೆ ಅದೊಂದು ನೆನಪಿನ ಓಲೆ … ನಿನ್ನಾಟ ನೋಡುತ್ತಲೇ ಕ್ರಿಕೆಟ್ ನ್ನ ಎಂಜಾಯ್ ಮಾಡಿವ ನಾನು, ನೀನಾಡುವ ಶೈಲಿಯನ್ನೆ ಅನುಕರಿಸಿದವ ನಾನು. ಕ್ರಿಕೆಟ್ ಅಂಗಳದಲ್ಲಿ ನೀ ಹೊಡೆದ ಶಾಟ್ ಗಳು ಪೆವಿಲಿಯನ್ ದಾಟಿ ಮುಂದೆ ಸಾಗುತ್ತಿದ್ದರೆ ಮೆಚ್ಚಿ ಕುಣಿದಾಡುತ್ತಿದ್ದೆ .

ಅದೇನೂ ಸುಮ್ಮನೆ ಬಂದಿದ್ದಲ್ಲ. ಓದುವ ವಯಸ್ಸಲ್ಲಿ ಆಡಲು ನಿಂತ ನಿನಗೆ ಎದರಾದ ಸಂಕಷ್ಟಗಳು ಒಂದಾ ಎರಡಾ, ? ಮೊದಲ ಪಂದ್ಯದಲ್ಲಿ ವಕಾರ್ ಎಸೆದ ಚೆಂಡು ನೆತ್ತರ ಬಸಿದಾಗ ಆದ ನೋವೆಷ್ಟು…? ಎಲ್ಲವನ್ನ ಸಹಿಸಿಕೊಂಡಿದ್ದೆಯಲ್ಲ…. ಹೇಗದು ವಿದಾಯದ ಹೊತ್ತಿನಲ್ಲಿ ತಿಳಿಸಿದೆ ಹೋದೆಯಲ್ಲ. ಸಾಧನೆ ಸಹಿಸಿದ ಮನ ಹೀಗೆಳೆದ ನೆನಪುಗಳೆಲ್ಲಾ ಮೆರೆತೆ ಹೊಯಿತಾ ನಿನಗೆ . ಅಥವಾ ಕ್ರಿಕೆಟ್ ಧರ್ಮಕ್ಕೆ ದೇವರೆನಿಸಿದ್ದ ನಿನ್ನಲ್ಲಿ ಮಾನವ ಸಹಜ ಗುಣಗಳೆ ಇರಲಿಲ್ಲವಾ ? ಅಥವಾ ನಿನಗೆ ದೇವರು ಕೊಟ್ಟ ಹೃದಯವೆ ಅಂತದ್ದಾ ? ಅದಕ್ಕೆ ಇರಬೇಕು ನನ್ನಪಾಲಿಗೆ ನೀನು ಮಾಂತ್ರಿಕನಂತೆ ಕಂಡಿದ್ದು…..

ಶಾರ್ಜಾದ ಮೈದಾನದಲ್ಲಿ ಕಾಂಗರೂಗಳನ್ನ ಬಗ್ಗುಬಡಿದ ಆಟ ಮರೆಯಲು ಸಾದ್ಯವಾ ? ,ವಿಶ್ವಕಪ್ನಲ್ಲಿ ನೆಲಕಚ್ಚಿ ಆಡಿದ ನಿನ್ನ ಒಂದೊಂದು ಶಾಟ್ ಗಳು, ಸೆಮಿಫೈನಲ್ ನಲ್ಲಿ ದೇಶವನ್ನ ಗೆಲ್ಲಿಸಿದ ಶೌರ್ಯ, ಕೆ ಜಿ ತೂಕದ ಬ್ಯಾಟನಲ್ಲಿ ನೀಡಾಡಿದ ಒಂದೊಂದು ಇನ್ನಿಂಗ್ಸೂ ಅದ್ಬುತ. ಹಾ ಇಂದಿಗೂ ಮಾಸದೆ ಉಳಿದಿದೆ. ಹೀರೋಕಪ್ ಪೈನಲ್ ನಲ್ಲಿ ನೀ ಮಾಡಿದ ಬೌಲಿಂಗ್ . ಸಚಿನ್ ನಿಜಕ್ಕೂ ನೀನು ಗ್ರೇಟ್ …

ಒಣತರ್ಕ….

ಹುಗಿದ ಚರಿತ್ರೆಯ
ಬಗೆದಗೆದು ಮುಗಿಸಿದೆ..
ಕಾಲೂರುವ ಹೆಜ್ಜೆಯನ್ನು
ನೀನೇ ತಿರ್ಮಾನಿಸಿದೆ..
ನಾಳೀನ ಪ್ರಶ್ನೆಗೂ,
ವಿತಂಡ ವಿವಾಧವೆತ್ತಿಹೇ ,

ತರ್ಕವೋ,ಭೌಧ್ದಿಕತೆಗೋ,
ವಿಚಾರಮಂಥನಕೋ
ಪ್ರಭುದ್ದತೆಯೆ ಪ್ರರ್ದಶನದಿ,
ನೀನಾಡಿದ ಮಾತು
ವರ್ಗ ಸಂಘರ್ಷವಾಗಿ ಸಿಡಿದಿದೆ
ಆದರೂ ಸಮದಾನವಿಲ್ಲ ಮತಿಗೇ !

ಒಡೆದಣುವಿಂದ ಜನಿಸಿದ ಜೀವ
ವಾನರ, ನರನಾಗಿ ಅವಿರ್ಭವಿಸಿ
ಎಡತಾಕಿದ ಗ್ರಹನಕ್ಷತ್ರದಾಚೆಗೂ,
ಕಾಡುತಿದೆ ಸತ್ಯಮಿಥ್ಯದ ಸಂಶಯ….
ಇರಲೆಲ್ಲಾ ಇದ್ದಹಾಗೆ, ಕದಡದೆ
ನಡೆವುದಾ ನೋಡುತ ನಡೆ…

ಹರೆಯ ಮುದಿಯಾಗಿ
ದೇಹ ಮರಳಿ ಮಣ್ಣಾಗಿ
ನಿಜ ಪ್ರಕೃತಿಯ ಸೇರೊ
ಕಾಲದ ಸತ್ತ್ಯ  ತಿಳಿದುಕೋ
ನಾಲಿಗೆ ನೀ..
ಅಪಕ್ವ ಕಂಪನದ ತುಟಿಯ
ಇನ್ನಾದರೂ ಹೊಲಿದುಕೋ